ಶುಕ್ರವಾರ, ಏಪ್ರಿಲ್ 29, 2011


ಇದು ಈ ಹಿಂದೆ ಇದ್ದ ನಮ್ಮೂರಿನ ಪ್ರವೇಶ ದ್ವಾರ.. ಆದರೆ ಇಲ್ಲಿಂದ ನಮ್ಮೂರ ಗಡಿ ಶುರುವಾಗುತ್ತದೆ ಎಂದಲ್ಲ. ಕಿ.ಮಿ ದೂರದಷ್ಟು ಹಿಂದಿನಿಂದಲೇ ನಮ್ಮೂರ ಗಡಿ ಶುರು. ಈಗ ಈ ದ್ವಾರವಿಲ್ಲ. ಹೀಗಾಗಿ ಇದು ಉಳಿದಿರುವುದು ಚಿತ್ರದಲ್ಲಿ ಮಾತ್ರ. ಎಡ ಭಾಗದಲ್ಲಿ ಕಾಣುತ್ತಿರುವುದು ಶನೀಶ್ವರ ದೇಗುಲ. ಇದರ ಬಲ ಭಾಗದಲ್ಲಿ ಶಂಕರೇಶ್ವರ ದೇವಸ್ಥಾನವಿದೆ.

ಮಂಗಳವಾರ, ಜನವರಿ 4, 2011

ಮಲ್ಲಿಕಾರ್ಜುನ ದೇವಸ್ಥಾನ
ದೇವಸ್ಥಾನದ ಹೊರಭಾಗ 

ಶನೀಶ್ವರ ದೇವಸ್ಥಾನ 

ಶಂಕರೇಶ್ವರ ದೇವಸ್ಥಾನ
ತ್ರೇತಾಯುಗದಲ್ಲಿ ಸೀತೆ ಅರಣ್ಯದಲ್ಲಿ ರಾಮನೊಂದಿಗೆ ಸಂಚಾರದಲ್ಲಿ ತೊಡಗಿದ್ದಾಗ ಚಿನ್ನದ ಬಣ್ಣದ ಜಿಂಕೆಯಂತೆ ವೇಷ ಮರೆಸಿಕೊಂಡಿದ್ದ ಮಾರೀಚನನ್ನು ಕಂಡು ಅದನ್ನು ತಂದು ಕೊಡುವಂತೆ ಶ್ರೀರಾಮನಿಗೆ ಕೇಳಿಕೊಂಡಳು. ಅದರಂತೆ  ಮಾರೀಚ ಮೃಗವನ್ನು ಶ್ರೀರಾಮ ಕೊಲ್ಲಲು ಅಟ್ಟಿಸಿಕೊಂಡು ಹೋದಾಗ ಚಿನ್ನದ ಜಿಂಕೆಯ ವೇಷದಲ್ಲಿದ್ದ ಮಾರೀಚ ತಪ್ಪಿಸಿಕೊಂಡು ಓಡುತ್ತ ಮರುವಾಸೆಗೆ ಬರುತ್ತಾನೆ. ಶ್ರೀರಾಮ ಬಾಣದಿಂದ ಜಿಂಕೆಯನ್ನು ಕೊಲ್ಲುತ್ತಾನೆ. ಇದರಿಂದ ಈ ಊರಿಗೆ 'ಮೃಗವಧೆ' (ಮಿಗವನ್ನು ವಧಿಸಿದ ಸ್ಥಳ)  ಎಂಬ ಹೆಸರು ಬಂದಿತು. ಮಾರೀಚನ ತೊಡೆಯಿಂದ ಉದ್ಭವಿಸಿದ ಲಿಂಗವನ್ನು ರಾಮ ಬ್ರಾಹ್ಮೀ ನದಿಯ ದಂಡೆಯ ಮೇಲೆ ಇರಿಸಿದನು. ಇದೇ ಇಂದಿನ ಪ್ರಸಿದ್ಧ ಮಲ್ಲಿಕಾರ್ಜುನ ದೇವಸ್ಥಾನ.
ಪೌರಾಣಿಕ ಮಹತ್ವವನ್ನು ಹೊಂದಿರುವ ನಮ್ಮೂರು ಧಾರ್ಮಿಕವಾಗಿ ಶ್ರೀಮಂತವಾಗಿದೆ. ಮಲ್ಲಿಕಾರ್ಜುನ ದೇವಸ್ಥಾನ ಮಾತ್ರವಲ್ಲದೆ ಇಲ್ಲಿ ಶನೀಶ್ವರ , ಶಂಕರೇಶ್ವರ, ಉಗ್ರ ನರಸಿಂಹ, ಆಂಜನೇಯ ಮತ್ತು ಪಂಜುರ್ಲಿ ದೇವಾಲಯಗಳೂ ಇವೆ. ಮೃಗವಧೆ ಎಂದ ಕೂಡಲೇ ಮಲ್ಲಿಕಾರ್ಜುನ ದೇವಸ್ಥಾನದ ಮನಸಿಗೆ ಬರುತ್ತದೆಯಾದರೂ ಅತಿ ಹೆಚ್ಚು ಭಕ್ತರು ಭೇಟಿ ನೀಡುವುದು ಶನೀಶ್ವರ ದೇವಸ್ಥಾನಕ್ಕೆ. ನಂಬಿಕೆಯ ಹಿನ್ನೆಲೆಯಲ್ಲಿ ಈ ದೇವಾಲಯ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. shaneeshwara

ಮಂಗಳವಾರ, ಏಪ್ರಿಲ್ 20, 2010

ಸೋಮವಾರ, ಜುಲೈ 13, 2009

ನಮ್ಮೂರ ಸುತ್ತ ಮುತ್ತ

ಮೃಗವಧೆ ಕ್ಷೇತ್ರ ತೀರ್ಥಹಳ್ಳಿ ತಾಲ್ಲೂಕಿನಿಂದ ೨೫ ಕಿ ಮಿ  ಹಾಗು ಕೊಪ್ಪದಿಂದ  ೨೨ ಕಿಮಿ ದೂರದಲ್ಲಿದೆ. ಬಸ್ಸಿನ ಸೌಕರ್ಯಕ್ಕೆ ಕೊರತೆ ಇಲ್ಲದಿದ್ದರೂ ನಿರಂತರ ಸಂಚಾರ ವ್ಯವಸ್ಥೆಯಂತು  ಇಲ್ಲ. ಸರಾಸರಿ ಗಂಟೆಗೊಂದು ಬಸ್ ಎನ್ನಬಹುದು. ಶಿವಮೊಗ್ಗದಿಂದ ಮುಡುಬ ಮೂಲಕ ಒಳ ರಸ್ತೆಯಲ್ಲಿ ಮಲ್ಲಂದೂರು ಮಾರ್ಗವಾಗಿ ಬರಬಹುದು. ಇಲ್ಲಿ ರಸ್ತೆ ಇತ್ತು ಎಂಬುವುದಕ್ಕೆ ಕುರುಹುಗಳಿವೆ!! ತೀರ್ಥಹಳ್ಳಿಯಿಂದ ದೇವಂಗಿ ಅಥವಾ ಮೇಳಿಗೆ ಮಾರ್ಗದಲ್ಲೂ ಬರಬಹುದು. ಮೇಳಿಗೆ ಮಾರ್ಗದಲ್ಲಿ ಬರುವಾಗ ಪ್ರಸಿದ್ಧ ಚಿಪ್ಪಲುಗುಡ್ಡೆ ದೇವಸ್ಥಾನಕ್ಕೂ ಭೇಟಿ ನೀಡಬಹುದು. ಹಾಗೆಯೆ ಕುವೆಂಪು ಜನ್ಮಸ್ಥಳ ಕುಪ್ಪಳಿ ಸಹ ಇಲ್ಲಿಗೆ ಸಮೀಪವಿದೆ. ಮೃಗವಧೆಯಿಂದ ಸುಮಾರು ೭ ಕಿ.ಮಿ ದೂರದಲ್ಲಿರುವ ಹೆದ್ದೂರಿನಲ್ಲಿ ದೇವಿತೋ ನಾಗೇಶ್ ಅವರ ಅದ್ಭುತ ಕಲೆಗಳನ್ನು ನೋಡಬಹುದು.
ಕೆಲವೇ ವರ್ಷಗಳ ಹಿಂದೆ ನಮ್ಮೂರಿನ ಹಳ್ಳ ದಾಟಲು ಬಳಸುತ್ತಿದ್ದ ಸಾರ ಇದು. ಈಗ ಕಾಂಕ್ರೀಟಿನ ಸೇತುವೆ ಬಂದಿದೆ. ಹಳೆಯ ಕುರುಹಾಗಿ ಇದು ಇನ್ನೂ ಜೀವಂತವಿದೆ.

ಗುರುವಾರ, ಆಗಸ್ಟ್ 7, 2008

ನಾನು, ನನ್ನಾಸೆ....


ನಮಸ್ಕಾರ..

ಆತ್ಮೀಯರೇ. ಇದು ನಮ್ಮೂರ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ರಚಿಸಿರುವ ಬ್ಲಾಗ್.  ಮಲೆನಾಡಿನ ಸುಂದರ ಮತ್ತು ಹೆಮ್ಮೆಯ ತಾಣವಾದ ತೀರ್ಥಹಳ್ಳಿ ಯಿಂದ ೨೫ ಕಿ.ಮೀ ದೂರದಲ್ಲಿರುವ ಪುಟ್ಟ ಊರು ನಮ್ಮೂರು. ಇದು ಕೊಪ್ಪ ತಾಲೂಕಿನಿಂದ ೨೩ ಕಿ.ಮೀ ದೂರದಲ್ಲಿದೆ. ನಮ್ಮೂರು ಪೌರಾಣಿಕ ಮತ್ತು ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದೆ. ಮಾತ್ರವಲ್ಲ ಸಾಂಸ್ಕ್ರತಿಕವಾಗಿಯು ನಮ್ಮೂರಿನ ಕಲಾವಿದರು ನಮ್ಮೂರಿನ ಕೀರ್ತಿಯನ್ನು ಪಸರಿಸಿದ್ದಾರೆ.
ನಿಜ. ಆಧುನಿಕತೆಯ ಅಬ್ಬರ , ಬದಲಾಗುತ್ತಿರುವ ಜನರ ಮನಸ್ಥಿತಿಯ ಗೊಂದಲಗಳ ನಡುವೆ ಮಲೆನಾಡು ತನ್ನ ಸೌಂದರ್ಯ, ಸಂಪತ್ತು ಕಳೆದುಕೊಳ್ಳುತ್ತಿದೆ. ಎಲ್ಲ ಮರೆಯಾಗುವ ಮುನ್ನ ನಮ್ಮೂರನ್ನು, ನಮ್ಮೂರಿನ ಸೊಗಡನ್ನು, ಮತ್ತೆ ನಮ್ಮ ಜನರನ್ನು ಸದಾ ನೆನಪಿಸಿಕೊಳ್ಳುವಂತೆ ಮಾಡುವುದು ನನ್ನ ಆಸೆ. ಅದಕ್ಕಾಗಿ ಈ ಬ್ಲಾಗ್.
ನಾನು ಕಲಿತ ಶಾಲೆ
ಅಂದಹಾಗೆ ನಾನು ಅಮಿತ್. ಅಕ್ಷರ ಕಲಿತಿದ್ದು , ಬೆಳೆದಿದ್ದು, ಇದೇ ಊರಲ್ಲಿ. ಹೈಸ್ಕೂಲು , ಪಿಯುಸಿ -ಪದವಿ (ತುಂಗಾ ಕಾಲೇಜ್ ) ತೀರ್ಥಹಳ್ಳಿ ಯಲ್ಲಿ. ಆಮೇಲೆ ಓದಿದ್ದು ಎಂ. ಎ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಕುವೆಂಪು ವಿಶ್ವವಿದ್ಯಾಲಯದಲ್ಲಿ. ಯಥಾಪ್ರಕಾರ ಓದು ಮುಗಿದ ಮೇಲೆ ಊರು ಬಿಟ್ಟು ಕೆಲಸಕ್ಕೆ ಬೆಂಗಳೂರು ಸೇರಿದ್ದೇನೆ. ಸುಂದರ ಊರಿನಿಂದ ಬಂದು ಎಲ್ಲ ಸೌಂದರ್ಯ ಕಳೆದುಕೊಂಡು ಬರಡಾಗಿರುವಂತೆ ಕಾಣುವ ಈ ನಗರಿಗೆ ಬಂದಾಗ ಊರು ಮತ್ತೆ ಮತ್ತೆ ಕರೆಯುತ್ತಿದೆ ಬಾ ಎಂದು. ಅಪರೂಪದ ಭೇಟಿ ಹೊರತಾಗಿ ಊರನ್ನು ಹೀಗಾದರೂ ನೆನೆಸಿಕೊಂಡಾಗ...... ......  
ನನ್ನ ತುಂಗಾ ಕಾಲೇಜಿನ ಸ್ನೇಹಿತರೊಂದಿಗೆ .... ರಾಘು, ನಾನು, ಅಭಿಷೇಕ್ ಮತ್ತು ಹರ್ಷ
ನನ್ನ ಕಾಲೇಜಿನ ಸ್ನೇಹಿತರೊಂದಿಗೆ
ಬೆಂಗಳೂರಿಗೆ ಬಂದದ್ದು  ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಇಂಟರ್ನ್ಶಿಪ್ ಮಾಡಲು. ಹಾಗೆಯೇ ಅಲ್ಲಿಯೇ ಕೆಲಸವೂ ಸಿಕ್ಕಿತು. ಒಂದು ವರ್ಷ ಸಂ.ಕ. ದಲ್ಲಿ ವರದಿಗಾರನಾಗಿ ಕೆಲಸ ಮಾಡಿ, ಪ್ರಸ್ತುತ ಪ್ರಜಾವಾಣಿ ಪತ್ರಿಕೆಯಲ್ಲಿ ಉಪಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.